ಗುಬ್ಬಿ:
ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಹೂವಿನಕಟ್ಟೆ ಗ್ರಾಮದ ಶ್ರೀ ಗುಡ್ಡದ ರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಬ್ರಹ್ಮ ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಶ್ರೀಸ್ವಾಮಿಗೆ ಅಭಿಷೇಕ ಸುಪ್ರಭಾತ ಸೇವೆ ಪಂಚಾಮೃತ ಸೇವೆ ಜೊತೆಗೆ ಹೂವಿನಕಟ್ಟೆ ಮಾರಮ್ಮ ದೇವಿ ಹಾಗೂ ಜೋಗಿಹಳ್ಳಿ ಗ್ರಾಮದ ಶ್ರೀ ಮಣ್ಣಮ್ಮದೇವಿ ದೇವರುಗಳ ಆಗಮನದೊಂದಿಗೆ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಇನ್ನು ರಥ ಎಳೆಯುತ್ತಿದ್ದಂತೆ ಭಕ್ತರು ಬಾಳೆಹಣ್ಣು, ದವನ ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಈ ವೇಳೆ ಭಕ್ತರೊಬ್ಬರು ರಾಜ್ಯದ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಲಿ ಎಂದು ಬಾಳೆ ಹಣ್ಣಿನ ಮೇಲೆ ಬರೆದು ಶ್ರೀ ಗುಡ್ಡದ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಎಸೆದು ಭಕ್ತರು ಭಕ್ತಿ ಸಮರ್ಪಿಸಿದ್ದು ವಿಶೇಷವಾಗಿತ್ತು. ಇದಲ್ಲದೇ ಸುಡು ಬಿಸಿಲು ಲೆಕ್ಕಿಸದೇ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ಭಕ್ತರಿಗೆ ಅಲ್ಲಲ್ಲಿ ಪಾನಕ ಪಾಲಹಾರ ಹಾಗೂ ಮಜ್ಜಿಗೆಯನ್ನು ಭಕ್ತಾದಿಗಳು ವಿತರಿಸಿದರು.
ಬ್ರಹ್ಮ ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುವ ಜೊತೆಗೆ ರಥೋತ್ಸವಕ್ಕೆ ವಿಶೇಷವಾಗಿ ಬಾಳೆ ಹಣ್ಣು ದವನವನ್ನು ಎಸೆದು ಭಕ್ತಿ ಸಮರ್ಪಿಸಿದರು.