ಗುಬ್ಬಿ :
ಇತಿಹಾಸ ಪ್ರಸಿದ್ಧ ಗುಬ್ಬಿ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ರಥೋತ್ಸವ ಇಂದು ಸಹಸ್ರಾರು ಭಕ್ತರ ಸಮೂಹದಲ್ಲಿ ವಿಜೃಂಭಣೆಯಿಂದ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು, ಹೋಮ- ಹವನ ಜರುಗಿತು. ಅಲ್ಲದೇ ಗುಬ್ಬಿಯಪ್ಪ ದೇವರಿಗೆ ಹಾಗೂ ದೇವಸ್ಥಾನಕ್ಕೆ ಹಲವು ಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದ್ದು, ಭಕ್ತರ ಕಣ್ಮನ ಸೆಳೆಯಿತು.
ರಥೋತ್ಸವಕ್ಕೂ ಮುನ್ನ ಗುಬ್ಬಿಯಪ್ಪ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಮಧ್ಯಾಹ್ನ 1:45ರ ಸುಮಾರಿಗೆ ಗರುಡ ದೇವನ ಆಗಮನದೊಂದಿಗೆ ಗುಬ್ಬಿಯಪ್ಪನ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಎಳೆಯಲಾಯಿತು. ರಥ ಎಳೆಯುತ್ತಿದ್ದಂತೆ ಬಾಳೆಹಣ್ಣು, ದವನ ಎಸೆದು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರು. ಜೊತೆಗೆ ಗುಬ್ಬಿಯಪ್ಪನಿಗೆ ನವ ದಂಪತಿಗಳು ಹರಕೆ ಸಲ್ಲಿಸುವ ವಿಶೇಷ ಪದ್ಧತಿ ಸಹ ಇಲ್ಲಿ ನಡೆಯುವುದು ವಿಶೇಷವಾಗಿತ್ತು.
ರಥೋತ್ಸವಕ್ಕೆ ಬಂದಿದ್ದ ಸಾವಿರಾರು ಲಕ್ಷಾಂತರ ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ದಾಸೋಹ ಸಮಿತಿ ಎರಡು ದಿನಗಳಿಂದ ಹಗಲು ಇರುಳು ಶ್ರಮಿಸಿ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದರು. ಬಿಸಿಲಿನ ಝಳಕಕ್ಕೆ ಬಸವಳಿದಿದ್ದ ಭಕ್ತರಿಗೆ ಕುಡಿಯಲು ಮಜ್ಜಿಗೆ, ಪಾನಕವನ್ನು ವಿತರಿಸಲಾಯಿತು. ದಾಸೋಹಕ್ಕೆ ಜಾತಿ ಭೇದ ತೋರದೆ ಭಕ್ತರು ದೇಣಿಗೆ ರೂಪದಲ್ಲಿ ದವಸ ಧಾನ್ಯಗಳನ್ನು ನೀಡಿದರು. ಇದೇ ತಿಂಗಳ 23ರವರೆಗೆ ಗುಬ್ಬಿಯಪ್ಪನ ಜಾತ್ರೆ ನಡೆಯಲಿದ್ದು, ನಿತ್ಯ ಒಂದೊಂದು ವಿಶೇಷ ಕಾರ್ಯಕ್ರಮಗಳು ನಡೆಯುತ್ತಲೇ ಇರಲಿದ್ದು, ನಿತ್ಯ ಸಾವಿರಾರು ಮಂದಿ ಭಕ್ತರು ಗುಬ್ಬಿಯಪ್ಪ ದರ್ಶನ ಪಡೆದು ಪುನೀತರಾಗುತ್ತಾರೆ.