ಬಾಗಲಕೋಟೆ : ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗುತ್ತಿರುವ ಘಟನೆಗಳು ಆತಂಕವನ್ನು ಮೂಡಿಸುತ್ತಿವೆ. ಇತ್ತೀಚಿಗೆ ಉಡುಪಿಯಲ್ಲಿ ಕೇವಲ 32ರ ಹರೆಯದ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಾಘಾತಕ್ಕೆ ಬಲಿಯಾದ ವಿಚಾರ ಚಿತ್ರರಂಗಕ್ಕೂ ಭಾರೀ ಆಘಾತ ನೀಡಿತ್ತು.
ಇದೀಗ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ವೇಳೆ ಮನ ಮೆಚ್ಚಿದ ಹುಡುಗಿಗೆ ತಾಳಿ ಕಟ್ಟಿದ ಯುವಕ ಪ್ರವೀಣ್ ಕುರಣಿ, ಆರತಕ್ಷತೆಯಲ್ಲಿ ನಿಲ್ಲುವ ಮುನ್ನವೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಜಮಖಂಡಿ ನಗರದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ.
ಪ್ರವೀಣ್ ಕುರಣಿ, ರಾಜ್ಯ ಸೈಕ್ಲಿಂಗ್ ಕಾರ್ಯದರ್ಶಿ ಶ್ರೀಶೈಲ ಕುರಣಿ ಅವರ ಪುತ್ರ. ಅವರು ಮೂಲತಃ ಕುಂಬಾರಹಳ್ಳಿ ಗ್ರಾಮದವರು. ಇಂದು ಬೆಳಗ್ಗೆ ಜಮಖಂಡಿಯಲ್ಲಿರುವ ತಮ್ಮ ಮನೆಯಲ್ಲಿ ದೈವದ ಅಕ್ಕಿಕಾಳು ನೆರವೇರಿಸಿದ್ದ ಅವರು, ಬಳಿಕ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಆರತಕ್ಷತೆಗೆ ಹಾಜರಾಗಿದ್ದರು. ಮದುವೆ ಸಂಭ್ರಮದ ಮಧ್ಯೆ ಸಂಭವಿಸಿದ ಈ ದುರ್ಘಟನೆ ಎಲ್ಲರಿಗೂ ಆಘಾತ ನೀಡಿದ್ದು, ನಗು ನಗುತ್ತಿದ್ದ ಮನೆಯಲ್ಲಿ ಕ್ಷಣ ಮಾತ್ರದಲ್ಲೇ ಸೂತಕದ ಛಾಯೆ ಆವರಿಸಿದೆ.