BANGALORE NEWS : ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಆಗುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದು, ಇದರಿಂದ ಆದಾಯದಲ್ಲಿ ನಷ್ಟ ಉಂಟಾಗುತ್ತಿದೆಯಂತೆ. ಹೀಗಾಗಿ ಅದನ್ನು ಸರಿದೂಗಿಸಲು ನಮ್ಮ ಮೆಟ್ರೋ ರೈಲಿನ ಒಳಭಾಗ ಮತ್ತು ಹೊರಭಾಗದಲ್ಲೂ ಜಾಹೀರಾತು ಹಾಕಲು ಮುಂದಾಗಿದೆ.
ಟಿಕೆಟ್ ದರ ಏರಿಕೆಯ ಪರಿಣಾಮವಾಗಿ ‘ನಮ್ಮ ಮೆಟ್ರೋ’ಯಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದರ ನೆರಳಲ್ಲಿ BMRCL ಗೆ ಆದಾಯ ನಷ್ಟವಾಗುತ್ತಿದೆ ಎನ್ನಲಾಗಿದೆ. ಈ ಆರ್ಥಿಕ ಹೊಡೆತದಿಂದ ಪಾರಾಗಲು, ಮೆಟ್ರೋ ನೂತನ ತಂತ್ರವೊಂದನ್ನು ಆಯ್ದುಕೊಂಡಿದೆ – ರೈಲುಗಳ ಒಳಭಾಗ ಮತ್ತು ಹೊರಭಾಗದಲ್ಲೂ ಬಣ್ಣ ಬಣ್ಣದ ಜಾಹೀರಾತುಗಳು ಹಾಕಲು ಮುಂದಾಗಿದೆ.
ಇದುವರೆಗೆ ಜಾಹೀರಾತುಗಳಿಂದ ದೂರವಿದ್ದ ಮೆಟ್ರೋ ಈಗ ಎಲ್ಲಾ 57 ರೈಲುಗಳಿಗೆ ಜಾಹೀರಾತು ಅಳವಡಿಸಲು ಮುಂದಾಗಿದೆ. ನೇರಳೆ ಮಾರ್ಗದ 33 ಮತ್ತು ಹಸಿರು ಮಾರ್ಗದ 24 ರೈಲುಗಳು ಈಗಾಗಲೇ ಜಾಹೀರಾತಿನಿಂದ ಮಿಂಚುತ್ತಿರುವುದು ದೃಷ್ಟಿಗೆ ಬೀಳುತ್ತಿದೆ. ರೈಲುಗಳ ಮೂಲ ಬಣ್ಣವನ್ನು ಉಳಿಸದೇ, ಸಂಪೂರ್ಣವಾಗಿ ಜಾಹೀರಾತುಗಳಿಗೆ ಅವಕಾಶ ನೀಡಲಾಗಿದೆ. ಮೆಟ್ರೋ ಹೊರಭಾಗ ಮಾತ್ರವಲ್ಲ, ಒಳಭಾಗದಲ್ಲಿಯೂ ಜಾಹೀರಾತುಗಳು ಸಜ್ಜಾಗಲಿವೆ.
ಈ ಕುರಿತು ಮಾತನಾಡಿದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಅವರು, “ನಷ್ಟದಿಂದ ಹೊರಬರಲು ಈ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರ ಅನುಭವವನ್ನು ಹಾನಿಯಾಗದಂತೆ ನೋಡಿಕೊಳ್ಳಲಾಗುವುದು,” ಎಂದು ಸ್ಪಷ್ಟಪಡಿಸಿದ್ದಾರೆ.