ತುಮಕೂರು :
ಗುಬ್ಬಿ ತಹಶೀಲ್ದಾರ್ ವಿರುದ್ದ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ನಿನ್ನೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಭೂಮಿಗಾಗಿ ರೈತರು ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿ, ರೈತ ಸಂಘದ ಸದಸ್ಯರನ್ನು ನಿಂದಿಸಿ, ಆರೋಪ ಮಾಡಿದ ತಹಶೀಲ್ದಾರ್ ಅವರು ರೈತರ ಬಳಿ ಕ್ಷಮೆ ಕೇಳ್ಬೇಕು, ಅಲ್ದೇ ಅರ್ಜಿಗಳನ್ನು ಸ್ವೀಕರಿಸಬೇಕು ಅಂತಾ ಪ್ರತಿಭಟನಾಕಾರರು ಪಟ್ಟುಹಿಡಿದಿದ್ದರು. ಈ ವೇಳೆ ಪ್ರತಿಭಟನಾನಿರತ ಸ್ಥಳಕ್ಕೆ ಆಗಮಿಸಿದ್ದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ಪ್ರತಿಭಟನೆಯಲ್ಲಿ ತೊಡಗಿದ್ದ ರೈತ ಸಂಘದ ಪದಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವಿಚಾರವಾಗಿ ಇದೀಗ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿ ಸುಬ್ರಮಣ್ಯ ಶಾಸಕ ಎಸ್.ಆರ್.ಶ್ರೀನಿವಾಸ್ ವಿರುದ್ಧ ತುಮಕೂರು ಎಸ್‌ಪಿಗೆ ದೂರು ನೀಡಿದ್ದಾರೆ.
ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುವ ವೇಳೆ ಸ್ಥಳಕ್ಕೆ ಬಂದ ಶಾಸಕರು ಮಾತಿನ ಚಕಮಕಿಯಲ್ಲಿ ಬೆದರಿಕೆ ಹಾಕಿದ್ದಾರೆ, ಸಾಕಷ್ಟು ವರ್ಷಗಳಿಂದ ಸಂಘಟನೆಯಲ್ಲಿ ಕೆಲಸ ಮಾಡ್ತಾ ಬರ್ತಿದ್ದೇನೆ. ಆದರೆ ಶಾಸಕರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ರೀತಿ ನಡೆದುಕೊಳ್ಳಬೇಕೆಂದು ಗೊತ್ತಿಲ್ಲ. ಅಷ್ಟು ಆವೇಶ ಭರಿತವಾಗಿ ಮಾತನಾಡೋದನ್ನು ಸಂಘಟನೆ ಖಂಡಿಸುತ್ತೆ. ಅವರು ಬಳಸಿರೋ ಕ್ರಿಮಿನಲ್ ಪದಕ್ಕೆ ಕ್ಷಮೆ ಕೇಳಬೇಕು, ಇಲ್ಲವಾದರೆ ಪೊಲೀಸ್ ಇಲಾಖೆ ಅವರಿಗೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ನಾಳೆ ಎಲ್ಲಾ ಪ್ರಗತಿಪರ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶಾಸಕರ ವಿರುದ್ದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.