CHIKKABALLAPURA : ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರಕ್ಕೆ ಕುಸುಮ್ ಯೋಜನೆ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಈ ವೇಳೆ ಹೆಲಿಪ್ಯಾಡ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇತ್ತೀಚಿನ ರಾಜಕೀಯ ಬೆಳವಣಿಗೆಗಳ, ಯೋಜನೆಗಳ ಹಾಗೂ ಬಿಜೆಪಿ ವಿರುದ್ಧ ಗಂಭೀರ ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಮರು ಗಣತಿ ನಡೆಸುವ ಸೂಚನೆಯ್ನು ಹೈಕಮಾಂಡ್ ನೀಡಿದ್ದು, ಇದು ನನ್ನ ತೀರ್ಮಾನವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸ್ಪಷ್ಪಪಡಿಸಿದ್ದಾರೆ.
“ಮೈಖೆಲ್ ಕುನ್ಹಾ ಆಯೋಗದ ವರದಿಗೆ ತಾರ್ಕಿಕ ಅಂತ್ಯ ಹಾಡುತ್ತೇವೆ. ಜಾತಿಗಣತಿ ಕುರಿತಂತೆ ಹೈಕಮಾಂಡ್ ನಿರ್ದೇಶನದಂತೆ ನಾವು ಮುಂದುವರೆಯುತ್ತೇವೆ,” ಜಾತಿ ಗಣತಿ ನಡೆದಿದ್ದು 2015ರಲ್ಲಿ. ಈಗ 10 ವರ್ಷಗಳಾಗಿವೆ. ಆದ್ದರಿಂದ ಮರು ಸಮೀಕ್ಷೆ ನಡೆಸುವಂತೆ ನಿರ್ದೇಶನ ನೀಡಿದೆ. ಕೆಲವು ಬದಲಾವಣೆಗಳೊಂದಿಗೆ 60ರಿಂದ 70 ದಿನಗಳಲ್ಲಿ ಮರು ಸಮೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಚಿನ್ನಸ್ವಾಮಿ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ್ದು, “ಜನರ ಮುಂದೆ ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸ ಬಿಜೆಪಿಗೆ ಸಂಪ್ರದಾಯ, ಕುಂಭಮೇಳದಲ್ಲಿ 60-70 ಜನ ಸತ್ತಾಗ ರಾಜೀನಾಮೆ ಕೇಳಿದ್ರಾ? ಸೇತುವೆ ಕುಸಿದು ನೂರಾರು ಜನ ಸತ್ತಾಗ ಯಾರು ರಾಜೀನಾಮೆ ಕೊಟ್ಟರು? ಆಗ ಯಾರಾದರೂ ರಾಜೀನಾಮೆ ಕೊಟ್ಟರಾ ಎಂದು ವಾಗ್ದಾಳಿ ನಡೆಸಿದರು. ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಲ್ಲಿ ಸಾಕಷ್ಟು ಮಂದಿ ಮೃತಪಟ್ಟಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು
ಪ್ರಧಾನಿ ಮೋದಿಯವರ ಬಡತನ ನಿರ್ಮೂಲನೆ ಕುರಿತು ಪ್ರಶ್ನೆ ಎತ್ತಿದ ಅವರು, “ಮೋದಿ ಬಡತನ ನಿರ್ಮೂಲನೆ ಮಾಡಿದ್ದಾರೆನಾ? ಕಾಂಗ್ರೆಸ್ ಆಳ್ವಿಕೆಯಲ್ಲಿ ಜಾರಿ ತಂದ ಗರೀಬಿ ಹಠಾವೋ ಯೋಜನೆಯಿಂದ ದೇಶದಲ್ಲಿ ಬಡತನ ಕಡಿಮೆಯಾಗುತ್ತಾ ಬರುತ್ತಿದೆ,” ಎಂದರು.
ಬಿಜೆಪಿ ರಾಜಕೀಯವಾಗಿ ನಮ್ಮನ್ನು ಟೀಕೆ ಮಾಡುತ್ತಿದೆ. ಮಾಡಿಕೊಳ್ಳಲಿ ನಾವು ಜನರ ಪರವಾಗಿದ್ದೇವೆ. ಗ್ಯಾರಂಟಿಗಳಾಗಿ ಹಣ ಹೊಂದಿಸುವುದರ ಜೊತೆಗೆ ಅಭಿವೃದ್ಧಿಗೂ ಹಣ ಕೊಡುತ್ತಿದ್ದೇವೆ ಎಂದು ತಿಳಿಸಿದರು. ಅಧಿಕಾರಕ್ಕೆ ಬಂದ 2 ವರ್ಷದಲ್ಲಿ ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಗಳ ಪೈಕಿ ಶೇಕಡ 50 ರಷ್ಟು ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಆದರೆ, ಕೇಂದ್ರದ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಆಗುತ್ತಿದೆ. ಹತ್ತರಷ್ಟು ಭರವಸೆಗಳನ್ನು ಇದುವರೆಗೂ ಈಡೇರಿಸಿಲ್ಲ ಎಂದು ಟೀಕಿಸಿದರು.
ಇನ್ನು ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಎರಡು ವರ್ಷದಲ್ಲಿ ಎತ್ತಿನಹೊಳೆ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗುವುದು. ಸದ್ಯದಲ್ಲೇ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚುನಾಯಿತ ಜನ ಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುವುದು ಇದೇ ವೇಳೆ ಸಿಎಂ ಮಾಹಿತಿ ನೀಡಿದರು.
ಬಳ್ಳಾರಿಯ ಕಾಂಗ್ರೆಸ್ ಶಾಸಕರ ಮನೆ ಮೇಲೆ ಇ.ಡಿ ದಾಳಿ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ನಾವು ಕಾನೂನು ಅನುಷ್ಠಾನದಲ್ಲಿ ಅಡ್ಡಿಪಡಿಸಲ್ಲ. ಆದರೆ ರಾಜಕೀಯ ದುರುದ್ದೇಶದಿಂದ ಕಾನೂನು ದುರ್ಬಳಕೆ ಮಾಡಿಕೊಳ್ಳಬಾರದು” ಎಂದರು.