ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿದೆ. ಸೋಮವಾರ ಸಂಜೆಯಿಂದಲೇ ಬೆಂಕಿ ಹೊತ್ತಿ ಉರಿಯುತ್ತಿದ್ದು, ನಿಯಂತ್ರಣಕ್ಕೆ ಬಂದಿಲ್ಲ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ತಪ್ಪಲಿನಲ್ಲಿ ಬೆಂಕಿಯ ಕೆನ್ನಾಲಿಗೆಗೆ ನೂರಾರು ಎಕರೆ ಸಸ್ಯ ಸಂಪತ್ತು ಸುಟ್ಟು ಕರಕಲಾಗಿದೆ. ಅಪರೂಪದ ಔಷಧೀಯ ಸಸ್ಯ ಸಂಪತ್ತು ಹೊಂದಿರುವ ಪರ್ವತ ಇದಾಗಿದ್ದು,ಹಲವಾರು ಸಸ್ಯಗಳು ಸುಟ್ಟು ಭಸ್ಮವಾಗಿದೆ. ಗಾಳಿಯ ವೇಗಕ್ಕೆ ಬೆಂಕಿ ತೀವ್ರ ಸ್ವರೂಪ ಪಡೆಯುತ್ತಿದೆ.
ನೆನ್ನೆ ಸಂಜೆ ಕಾಣಿಸಿಕೊಂಡ ಬೆಂಕಿ ಸುಮಾರು ರಾತ್ರಿವರೆಗೂ ಹೊತ್ತಿ ಉರಿದಿದೆ. ಈ ವೇಳೆ ಅಗ್ನಿಶಾಮಕ ಸಿಬ್ಬಂದಿ ಮತ್ತುಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಆಗ್ನಿಶಾಮಕ ವಾಹನ ಹೋಗದ ಕಡೆಗಳಲ್ಲಿ ಅಧಿಕಾರಿಗಳು ಸೊಪ್ಪಿನ ರೆಂಬೆ ಹಾಗೂ ಕೆಲ ಆಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು ಬಳಸಿ ರಾತ್ರಿ ವರೆಗೂ ಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ. ಅರಣ್ಯಕ್ಕೆ ಬೆಂಕಿ ಹೇಗೆ ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಪ್ರವಾಸಿಗರ ಸಿಗರೇಟ್ನಿಂದ ಬೆಂಕಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.