ಬೀದರ್:
ಬೀದರ್ – ಔರಾದ್ ಹೆದ್ದಾರಿಯ ಮುಸ್ತಾಪುರ ಗೇಟ್ ಬಳಿ ಟಿಟಿ ವಾಹನ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ವೈದ್ಯರೊಬ್ಬರು ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಅಪಘಾತದಲ್ಲಿ ಸಂತಪೂರ ಗ್ರಾಮದ ವೈದ್ಯ ನೀಲಕಂಠರಾವ್ ಭೋಸ್ಲೆ (60) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯು ವೃತ್ತಿಯಲ್ಲಿ ವೈದ್ಯರಾಗಿದ್ದು, ಇವರು ಸಂತಪೂರ ಗ್ರಾಮದಲ್ಲಿ ಆಸ್ಪತ್ರೆ ನಡೆಸುತ್ತಿದ್ದರು ಎನ್ನಲಾಗಿದೆ. ಇಂದು ಬೆಳಿಗ್ಗೆ ಮುಸ್ತಾಪುರ ಗೇಟ್ ಬಳಿ ಬೀದರ್ ಕಡೆಯಿಂದ ಸಂತಪುರಗೆ ಬೈಕ್ ಮೇಲೆ ಬರುತ್ತಿದ್ದ ಡಾ. ಭೋಸ್ಲೆ ಅವರಿಗೆ ಔರಾದ್ ಕಡೆಯಿಂದ ಬರುತ್ತಿದ್ದ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ ವೈದ್ಯ ಭೋಸ್ಲೆ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 161 ಪ್ರಗತಿಯಲ್ಲಿರುವ ಟೋಲ್ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಸಂತಪೂರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.