ಬೆಂಗಳೂರು : ಇಂದು ಕ್ಯಾಬಿನೆಟ್ ನಲ್ಲಿ ʼಜಾತಿʼ ಸದ್ದು | ಸಿಎಂ ಸೀಟಿಗೆ ತೂಗುಗತ್ತಿಯಾಗುತ್ತಾ ವರದಿ?

ಬೆಂಗಳೂರು :

ಜಾತಿ ಗಣತಿ ವರದಿ ಕುರಿತು ಮಹತ್ವದ ಚರ್ಚೆ ನಡೆಸುವ ವಿಶೇಷ ಸಚಿವ ಸಂಪುಟ ಸಭೆ ಇಂದು ಸಂಜೆ 4 ಗಂಟೆಗೆ ನಡೆಯಲ್ಲಿದ್ದು, ಮಂತ್ರಿಮಂಡಲ ತೆಗೆದುಕೊಳ್ಳುವ ನಿರ್ಣಯಗಳ ಬಗ್ಗೆ ರಾಜ್ಯದ ಜನತೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಜಾತಿ ಗಣತಿ ವರದಿ ಈಗ ದಿಢೀರ್​​​​​ ಮುನ್ನೆಲೆಗೆ ಬಂದಿದೆ. ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ದತ್ತಾಂಶಗಳ ಮಾಹಿತಿ ಆಧರಿಸಿ, ಮಾಜಿ ಸಂಸದ ಜಯಪ್ರಕಾಶ ಹೆಗಡೆ ಸಾರಥ್ಯದ ಹಿಂದುಳಿದ ವರ್ಗಗಳ ಆಯೋಗ ಕಳೆದ ವರ್ಷ ಫೆಬ್ರವರಿ ಅಂತ್ಯದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದರ ಜಾರಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಹೋದ್ಯೋಗಿಗಳ ಜೊತೆ ಇಂದು ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಬಗ್ಗೆ ಚರ್ಚಿಸಬೇಕಾದ ಸಂಗತಿಗಳ ಅಜೆಂಡಾ ಸಿದ್ಧಪಡಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಜಾತಿ ಗಣತಿ ವರದಿಯಲ್ಲಿ ಶಿಫಾರಸು ಮಾಡಿದಂತೆ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇಕಡ 32ರಿಂದ 51ಕ್ಕೆ ಏರಿಕೆ ಮಾಡುವ ಕುರಿತು ಪ್ರಮುಖವಾಗಿ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಜಾತಿಗಣತಿ ವರದಿಯಲ್ಲಿ ಸಮುದಾಯವಾರು, ಜಾತಿವಾರು, ಪ್ರವರ್ಗವಾರು ಎಷ್ಟು ಜನಸಂಖ್ಯೆ ಇದೆ ಎನ್ನುವ ಮಾಹಿತಿಯನ್ನು ಜಾತಿ ಗಣತಿ ವರದಿಯಲ್ಲಿ ತಿಳಿಸಲಾಗಿದೆ. ಈ ಅಂಕಿ, ಸಂಖ್ಯೆಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದು, ಸಚಿವರುಗಳು ಕ್ಯಾಬಿನೆಟ್ ಸಭೆಯಲ್ಲಿ ವರದಿಯ ಪರ ವಿರೋಧ ಚರ್ಚೆ ನಡೆಸುವ ಸಂಭವವಿದೆ. ಇಂದು ನಡೆಯುವ ಸಭೆಯಲ್ಲಿ ಯಾವ ಯಾವ ಸಮುದಾಯಗಳಿಗೆ ಎಷ್ಟರ ಮಟ್ಟಿಗೆ ನ್ಯಾಯ ಸಿಗಲಿದೆ ಎಂದು ಕಾದು ನೋಡಬೇಕಿದೆ.

Author:

...
Sushmitha N

Copy Editor

prajashakthi tv

share
No Reviews