ಈಗಿನ ಮಕ್ಕಳಂತೂ ಮೊಬೈಲ್‌ಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ ಎನ್ನುವುದು ಅನೇಕ ಪೋಷಕರ ದೂರು. ಅದೇ ರೀತಿ ಮೊಬೈಲ್‌ಗೆ ಅಂಟಿಕೊಂಡಿದ್ದ ಮಗಳಿಗೆ ಮೊಬೈಲ್ ಹೆಚ್ಚು ನೋಡ್ಬೇಡ ಎಂದು ಬುದ್ದಿ ಹೇಳಿದ್ದಕ್ಕೆ ಬಾಲಕಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಧನುಶ್ರೀ [2೦] ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾರೆ.
ಹೌದು ,ಧನುಶ್ರೀ ಶಿವಮೊಗ್ಗದ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಹಾರನಹಳ್ಳಿ ಗ್ರಾಮದಲ್ಲಿ ಮುಂದಿನ ವಾರ ಮಾರಿಕಾಂಬ ಜಾತ್ರೆ ಇತ್ತು, ಜಾತ್ರೆ ಹಿನ್ನಲೆ ತಾಯಿ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಳು. ಈ ವೇಳೆ ಮೊಬೈಲ್ ನೋಡುತ್ತಾ ಕುಳಿತಿದ್ದ ಧನುಶ್ರೀ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಳು. ಇದನ್ನು ಗಮನಿಸಿದ್ದ ಪೋಷಕರು ಮೊಬೈಲ್ ಹೆಚ್ಚು ಬಳಸಬೇಡ, ಓದಿನ ಕಡೆ ಗಮನ ಕೊಡು ಎಂದು ಬುದ್ದಿ ಹೇಳಿದ್ದರು.
ಇದೇ ವಿಚಾರಕ್ಕೆ ಮನನೊಂದ ಯುವತಿ ಕಳೆದ ೩ ದಿನದ ಹಿಂದೆ ಮನೆಯಲ್ಲಿ ವಿಷ ಸೇವಿಸಿದ್ದಳು. ವಿಷ ಸೇವಿಸಿದ್ದ ಯುವತಿಯನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಧನುಶ್ರೀ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.