ಶಿವಮೊಗ್ಗ:
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಮಂಗಳವಾರ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿರುವುದಾಗಿ ಅಸ್ಪತ್ರೆಯಲ್ಲಿ ವೈದ್ಯರು ಘೋಷಿಸಿದ ಬಳಿಕ ಮೃತದೇಹವನ್ನು ಮನೆಗೆ ತೆಗೆದುಕೊಂಡು ಬಂದಾಗ ಮಹಿಳೆ ಕಣ್ತೆರೆದ ಘಟನೆ ನಡದಿದೆ.
ಗಾಂಧಿನಗರ ನಿವಾಸಿಯಾದ ಮೀನಾಕ್ಷಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿನ ವೈದ್ಯರು ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ನಂತರ ಕುಟುಂಬದವರು ಆಕೆಯ ಅಂತ್ಯಕ್ರಿಯೆಗೆ ಸಿದ್ದತೆ ನಡೆಸಿಕೊಳ್ಳುತಿದ್ದರು, ಪಾರ್ಥೀವ ಶರೀರವನ್ನು ವಾಹನದಲ್ಲಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ, ಬಳಿಕ ವಾಹನದಿಂದ ಕೆಳಗೆ ಇಳಿಸಿಕೊಳ್ಳುವಾಗ ಸತ್ತ ಮಹಿಳೆ ಕಣ್ತೆರೆದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಮಹಿಳೆಗೆ ಜೀವ ಇರುವುದು ಖಾತ್ರಿ ಆದ ಮೇಲೆ ನೀರು ಕುಡಿಸಿ, ಹತ್ತಿರದ ನರ್ಸಿಂಗ್ ಹೋಂಗೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.