GUBBI : ಪೊಲೀಸ್ ಇಲಾಖೆಯ ಅಧಿಕಾರಿ ಆಗಲಿ ಅಥವಾ ಸಿಬ್ಬಂದಿ ಆಗಲಿ ಅವರು ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಸ್ಟಿಕ್ಕರ್ ಹಾಕಿಕೊಂಡು ಓಡಾಡುವಂತಿಲ್ಲ ಎಂದು ಗೃಹ ಸಚಿವರು ಕಳೆದ ಮಾರ್ಚ್‌ನಲ್ಲಿ ಆದೇಶವನ್ನು ಹೊರಡಿಸಿದ್ದಾರೆ. ಒಂದು ವೇಳೆ ಪೊಲೀಸ್ ಎಂದು ಸ್ಟಿಕ್ಕರ್ ಹಾಕಿಸಿದ್ದೇ ಆದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ಗೃಹ ಸಚಿವರ ಆದೇಶವನ್ನು ಗೃಹ ಸಚಿವ ಪರಮೇಶ್ವರ್ ಅವರ ಜಿಲ್ಲೆ ತುಮಕೂರಿನಲ್ಲೇ ಉಲ್ಲಂಘನೆ ಆಗಿದೆ.
ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ಗೃಹ ಸಚಿವ ಪರಮೇಶ್ವರ್ ಆದೇಶ ಉಲ್ಲಂಘನೆ ಆಗಿದೆ. ಗುಬ್ಬಿ ಪಟ್ಟಣದ ತಾಲೂಕು ಕಚೇರಿ ಆವರಣದಿಂದ ಬಸ್ ನಿಲ್ದಾಣ ಸೇರಿ ಪಟ್ಣಣದ ಹಲವೆಡೆ ಪೊಲೀಸ್ ಎಂದು ಸ್ಟಿಕ್ಕರ್ ಹಾಕಿಕೊಂಡು ಖಾಸಗಿ ಕಾರೊಂದು ಸಂಚಾರ ಮಾಡ್ತಿದೆ. ಈ ಕಾರು ಇಂದು ಗುಬ್ಬಿ ಪಟ್ಟಣದಲ್ಲಿ ಹಲವಾರು ಬಾರಿ ಸಂಚಾರ ಮಾಡಿದ್ದು, ಆ ಕಾರಿನಲ್ಲಿ ಯಾವುದೇ ಪೊಲೀಸ್ ಅಧಿಕಾರಿ ಆಗಲಿ ಸಿಬ್ಬಂದಿ ಆಗಲಿ ಇಲ್ಲ. ಆದ್ರು ಕೂಡ ಪೊಲೀಸ್ ಸ್ಟಿಕ್ಕರ್ ಹಾಕಿಕೊಂಡು ಸಂಚಾರ ಮಾಡಿದೆ.
ಅದೇನೆ ಆಗಲಿ, ಪೊಲೀಸ್ ಇಲಾಖೆಗೆ ಸೇರಿದರೂ ಕೂಡ ಪೊಲೀಸ್ ಎಂದು ಸ್ಟಿಕ್ಕರ್ ಹಾಕಿಕೊಳ್ಳುವಂತಿಲ್ಲ ಎಂದು ನಿಯಮ ಇದ್ದರೂ ಕೂಡ ನಿಯಮ ಮೀರಿ ಗಾಡಿ ಓಡಾಡ್ತಾ ಇದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಾ ಎಂದು ಕಾದುನೋಡಬೇಕಿದೆ.