ತುಮಕೂರು :
ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಅಳಿವು ಉಳಿವಿನ ಹೋರಾಟ ನಡೆಸುತ್ತಿರೋದು ನಿಮಗೆಲ್ಲಾ ಗೊತ್ತೇ ಇದೆ. ಕೆಲವು ಸರ್ಕಾರಿ ಶಾಲೆಗಳಿಗೆ ಸರಿಯಾದ ಕಟ್ಟಡಗಳೇ ಇಲ್ಲ. ಇನ್ನು ಕೆಲವು ಶಾಲೆಗಳಿಗೆ ಒಳ್ಳೆಯ ಕಟ್ಟಡವಿದ್ರೆ ಶಿಕ್ಷಕರೇ ಇರಲ್ಲ. ಮತ್ತೆ ಕೆಲವೆಡೇ ಎಲ್ಲಾ ಸರಿಯಿದ್ರೂ ಮಕ್ಕಳೇ ಇರಲ್ಲ. ಹೀಗೆ ಒಂದಲ್ಲಾ ಒಂದು ಸಮಸ್ಯೆಯಿಂದ ಸರ್ಕಾರಿ ಶಾಲೆಗಳು ನಲುಗುತ್ತಿವೆ. ಈ ನಡುವೆ ಇಷ್ಟು ದಿನ ತನ್ನ ಆವರಣದಲ್ಲಿ ನಡೆಯತ್ತಿದ್ದ ಸರ್ಕಾರಿ ಶಾಲೆಯೊಂದನ್ನ ಸ್ಥಳಾಂತರ ಮಾಡಲು ತುಮಕೂರು ಜಿಲ್ಲಾ ಪೊಲೀಸ್ ಕಚೇರಿ ಮುಂದಾಗಿದ್ದು, ಬೇಸರದ ಸಂಗತಿಯಾಗಿದೆ.
ತುಮಕೂರು ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿಯೇ ಒಂದು ಸರ್ಕಾರಿ ಉರ್ದು ಶಾಲೆ, ಕನ್ನಡ ಶಾಲೆ ಹಾಗೂ ಒಂದು ಅಂಗನವಾಡಿ ಕೇಂದ್ರವಿದೆ. ಈ ಭಾಗದ ಸಾಕಷ್ಟು ಬಡಮಕ್ಕಳು ಇಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದ್ರೆ ಇಷ್ಟು ವರ್ಷ ಸುಮ್ಮನೇ ಇದ್ದ ಪೊಲೀಸ್ ಇಲಾಖೆ ಇದೀಗ ಇದ್ದಕ್ಕಿದ್ದ ಹಾಗೆ ಕಚೇರಿ ಆವರಣದಲ್ಲಿರುವ ಶಾಲಾ ಕಟ್ಟಡವನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲನೆ ಮಾಡುವಂತೆ ಶಿಕ್ಷಣ ಇಲಾಖೆಗೆ ಡಿಸಿ ಆದೇಶಿಸಿದ್ದಾರೆ.
ಸುಮಾರು 60 ವರ್ಷಗಳ ಹಿಂದೆ, ಪೊಲೀಸರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಉದ್ದೇಶದಿಂದ ಮೈಸೂರು ರಿಸವರ್ಡ್ ಆರ್ಮ್ಡ್ ಪೊಲೀಸ್ ಶಾಲೆ ಎಂದು ನಿರ್ಮಾಣ ಮಾಡಲಾಗಿತ್ತು. ಇಂದಿಗೂ ಈ ಶಾಲೆ ಇದೇ ಹೆಸರಿನಲ್ಲಿದೆ. ಜೊತೆಗೆ ಈ ಶಾಲೆಯ ಜಾಗ ಕೂಡ ಜಿಲ್ಲಾ ಪೊಲೀಸ್ ಇಲಾಖೆಯ ಅಧೀನದಲ್ಲಿಯೇ ಇದೆ. ಮೊದಲೆಲ್ಲ ಈ ಶಾಲೆಯಲ್ಲಿ ಪೊಲೀಸರ ಮಕ್ಕಳು ಮಾತ್ರ ವಿದ್ಯಾಭ್ಯಾಸ ಮಾಡ್ತಿದ್ರು.
ಆದ್ರೆ ದಿನಕಳೆದಂತೆ ಈ ಶಾಲೆಯಲ್ಲಿ ಓದುವ ಪೊಲೀಸರ ಮಕ್ಕಳ ಸಂಖ್ಯೆ ಕಡಿಮೆಯಾಗಿತ್ತು. ಹೀಗಾಗಿ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಶಾಲೆಯ ನಿರ್ವಹಣೆಯ ಜವಾಬ್ದಾರಿಯನ್ನ ಸಾರ್ವಜನಿಕ ಶಿಕ್ಷಣ ಇಲಾಖೆಗೆ ನೀಡಲಾಗಿತ್ತು. ಈ ಜಾಗದಲ್ಲಿ ಒಂದು ಸರ್ಕಾರಿ ಉರ್ದು ಶಾಲೆ, ಸರ್ಕಾರಿ ಕನ್ನಡ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳು ನಡೆಯುತ್ತಿದ್ವು. ಉರ್ದು ಶಾಲೆಯಲ್ಲಿ ಸುಮಾರು 25 ಮಂದಿ ಮಕ್ಕಳು, ಕನ್ನಡ ಶಾಲೆಯಲ್ಲಿ 27 ಮಂದಿ ಮಕ್ಕಳು ಓದುತ್ತಿದ್ದಾರೆ. ಆದ್ರೆ ಇದೀಗ ಸುರಕ್ಷತೆ ದೃಷ್ಟಿಯಿಂದ ಏಕಾಏಕಿ ಶಾಲೆಯನ್ನು ಸ್ಥಳಾಂತರ ಮಾಡುವಂತೆ ಪೊಲೀಸ್ ಇಲಾಖೆ ಪಟ್ಟು ಹಿಡಿದಿದ್ದು, ಇದ್ರಿಂದ ಸುಮಾರು 50 ಮಕ್ಕಳ ಭವಿಷ್ಯ ಅತಂತ್ರವಾಗಿದೆ.
ಇನ್ನು ಪೊಲೀಸ್ ಇಲಾಖೆ ಈ ಶಾಲೆಯನ್ನ ಶಿಫ್ಟ್ ಮಾಡಲು ಹೊರಟಿರೋದಕ್ಕೂ ಒಂದು ಕಾರಣವಿದೆ. ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಸದ್ಯ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಮಕ್ಕಳ ದೃಷ್ಟಿಯಿಂದ ಶಾಲೆಯನ್ನು ಬೇರೆಡೆ ಸ್ಥಳಾಂತರ ಮಾಡುವಂತೆ ಎಸ್‌ಪಿ ಅಶೋಕ್ ಕೆ.ವಿ, ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರಂತೆ. ಹೀಗಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಂದು ಈ ಶಾಲೆಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಭಿಪ್ರಾಯವನ್ನು ಸಂಗ್ರಹ ಮಾಡಿದ್ದಾರೆ. ಈ ವೇಳೆ ಪೋಷಕರು ಹಾಗೂ ಸ್ಥಳೀಯರು ಸರ್ಕಾರಿ ಶಾಲೆಯ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನಾವು ಈ ಶಾಲೆಯನ್ನು ಮುಚ್ಚಿಸಲು ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಮೊದಲು ಈ ಶಾಲೆಯಲ್ಲಿ ಪೊಲೀಸರ ಮಕ್ಕಳೇ ಹೆಚ್ಚು ಓದ್ತಾ ಇದ್ರು. ಆಗ ಪೊಲೀಸ್ ಇಲಾಖೆಗೆ ಈ ಶಾಲೆಯ ಅವಶ್ಯಕತೆ ಇತ್ತು. ಆದ್ರೀಗ ಬಡ ಮಕ್ಕಳೇ ವ್ಯಾಸಾಂಗ ಮಾಡ್ತಾ ಇರೋದ್ರಿಂದ ಈ ಶಾಲೆಯ ಅವಶ್ಯಕತೆ ಇಲ್ಲವಾಗಿದೆ. ಸುರಕ್ಷತೆ ನೆಪವೊಡ್ಡಿ ಶಾಲೆಯನ್ನು ಮುಚ್ಚಿಸಲು ಪೊಲೀಸ್ ಇಲಾಖೆ ಷಡ್ಯಂತ್ರ ಮಾಡ್ತಾ ಇದ್ಯಾ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ರು.
ಸುಮಾರು 60 ರಿಂದ 65 ವರ್ಷದ ಇತಿಹಾಸ ಇರೋ ಈ ಶಾಲೆ ಸರ್ಕಾರಿ ಶಾಲೆಯಾಗಿದ್ದು, ಸರ್ಕಾರ ಶಿಕ್ಷಣ ಇಲಾಖೆ ಹೆಸರಿಗೆ ಖಾತೆ ಮಾಡಿಕೊಳ್ಳಿ ಎಂದು ಸಾರಿ ಸಾರಿ ಹೇಳಿದ್ರು ಕೂಡ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ಯಂತೆ. ಒಂದು ವೇಳೆ ಶಾಲೆ ಏನಾದ್ರು ಸ್ಥಳಾಂತರ ಆದ್ರೆ ಇಲ್ಲಿರೋ ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗೋ ಭೀತಿ ಶುರುವಾಗಿದೆ. ಹೀಗಾಗಿ ಶಿಕ್ಷಣ ಇಲಾಖೆ, ಜಿಲ್ಲಾಧಿಕಾರಿ ಈ ಬಗ್ಗೆ ಕ್ರಮವಹಿಸಿ ಶಾಲೆಯನ್ನು ಸ್ಥಳಾಂತರ ಮಾಡಬೇಕೇ ಅಥವಾ ಇಲ್ಲೇ ಉಳಿಸಿಕೊಂಡು ಮಕ್ಕಳ ಸುರಕ್ಷತೆಗೆ ದಾರಿ ಹುಡುಕಬೇಕೇ ಅನ್ನೋದನ್ನ ನಿರ್ಧಾರ ಮಾಡಬೇಕಿದೆ.