Bengaluru ದಕ್ಷಿಣ ತಾಲೂಕಿನ ಮಾದಾಪಟ್ಟಣ ಸಮೀಪದ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರು ಮೃತಪಟ್ಟಿದ್ದಾರೆ…

Bengaluru ದಕ್ಷಿಣ ತಾಲೂಕಿನ ಮಾದಾಪಟ್ಟಣ ಸಮೀಪದ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಬಂಡೆ ಕುಸಿದು ಏಳು ಕಾರ್ಮಿಕರು ಮೃತಪಟ್ಟಿದ್ದಾರೆ.
ಇಂದು ಬೆಳಿಗ್ಗೆ ಕಾವೇರಿ ಕಂಪನಿಗೆ ಸೇರಿದ ಕಲ್ಲು ಕ್ವಾರಿಯಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 100 ಅಡಿ ಎತ್ತರದಲ್ಲಿ ಹಿಟಾಚಿ ಯಂತ್ರದ ಮೂಲಕ ಹೊಸ ಕ್ರಷರ್ಗಾಗಿ ಸ್ಥಳವನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿತ್ತು.
ಇದೇ ವೇಳೆ ಕೆಳಭಾಗದಲ್ಲಿ ಕಾರ್ಮಿಕರು ಕಲ್ಲು ಒಡೆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಈ ಸಂದರ್ಭ ಮೇಲಿನಿಂದ ದೊಡ್ಡ ಕಲ್ಲಿನ ಬಂಡೆಗಳು ಕೆಳಕ್ಕೆ ಉರುಳಿದ್ದು, ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದ ಪರಿಣಾಮ ಭೀಕರ ದುರಂತ ಸಂಭವಿಸಿದೆ.

ಮೂಲಗಳ ಪ್ರಕಾರ, ಹಿಟಾಚಿ ಚಾಲಕ ಎರಡು-ಮೂರು ದೊಡ್ಡ ಕಲ್ಲು ಬಂಡೆಗಳನ್ನು ಕೆಳಕ್ಕೆ ತಳ್ಳಿದ ವೇಳೆ ಕೆಳಭಾಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವುದನ್ನು ಗಮನಿಸಿರಲಿಲ್ಲ.
ಇದರಿಂದ ಬಂಡೆಗಳು ನೇರವಾಗಿ ಕಾರ್ಮಿಕರ ಮೇಲೆ ಬಿದ್ದು ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗಾಯಗೊಂಡಿರುವ ಹಲವರ ಸ್ಥಿತಿ ಗಂಭೀರವಾಗಿರುವುದರಿಂದ ಮೃತರ ಸಂಖ್ಯೆ ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ.

ದುರಂತದ ಮಾಹಿತಿ ತಿಳಿಯುತ್ತಿದ್ದಂತೆಯೇ ತಾವರೆಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ. ಸುರಕ್ಷತಾ ಕ್ರಮಗಳಲ್ಲಿ ನಿರ್ಲಕ್ಷ್ಯ ನಡೆದಿದೆಯೇ ಎಂಬ ಆಯಾಮದಲ್ಲಿಯೂ ಪರಿಶೀಲನೆ ನಡೆಯುತ್ತಿದೆ.
ಮೃತರಾದ ಕಾರ್ಮಿಕರು ಬಿಹಾರ ಮೂಲದ ವಲಸೆ ಕಾರ್ಮಿಕರು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ದುರಂತದ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರಕ್ಷಣಾ ಕಾರ್ಯಾಚರಣೆ ಹಾಗೂ ತನಿಖೆ ಮುಂದುವರಿದಿದೆ.
MUST WATCH : ದೇವರ ತಾಳಿಯನ್ನೇ ಟಾರ್ಗೆಟ್ ಮಾಡ್ತಿದ್ದ ಅಂತರ್ ರಾಜ್ಯ ಕಳ್ಳರನ್ನ ಬೇಟೆಯಾಡಿದ ಖಾಕಿ | TURUVEKERE NEWS |




