Bengaluru : ಬೆಂಗಳೂರಿನ ಲಾಲ್ಬಾಗ್ ನಲ್ಲಿ ಮನರಂಜನಾ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಹೊಸ ನಿರ್ಬಂಧಗಳನ್ನು ವಿಧಿಸಿದೆ.

ಬೆಂಗಳೂರು ನಗರದ ಲಾಲ್ಬಾಗ್ ಮತ್ತು ಕಬ್ಬನ್ ಪಾರ್ಕ್ಗಳಲ್ಲಿ ಹೆಚ್ಚುತ್ತಿರುವ ಮನರಂಜನಾ ಚಟುವಟಿಕೆಗಳು ಸಸ್ಯಸಂಪತ್ತಿಗೆ ಹಾನಿ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದು ಕಟ್ಟುನಿಟ್ಟಿನ ನಿಯಂತ್ರಣ ಹೇರಿದೆ.
ಈ ಕೆಲವು ಚಟುವಟಿಕೆಗಳನ್ನು ಮಾಡಿದ್ರೆ ಬೀಳುತ್ತೆ ದಂಡ
ಕಬ್ಬನ್ ಪಾರ್ಕ್ ನಂತರ ಈಗ ಲಾಲ್ಬಾಗ್ನಲ್ಲಿಯೂ ಹಲವಾರು ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ₹500 ದಂಡ ವಿಧಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
ನಿಗದಿತ ಸಮಯದಲ್ಲೇ ವಾಕಿಂಗ್–ಜಾಗಿಂಗ್
ಹೊಸ ನಿಯಮಗಳ ಪ್ರಕಾರ, ಲಾಲ್ಬಾಗ್ನಲ್ಲಿ ಬೆಳಿಗ್ಗೆ 5.30ರಿಂದ 9 ಗಂಟೆಯವರೆಗೆ, ಸಂಜೆ 4.30ರಿಂದ 7 ಗಂಟೆಯವರೆಗೆ ಮಾತ್ರ ವಾಕಿಂಗ್ ಮತ್ತು ಜಾಗಿಂಗ್ಗೆ ಅನುಮತಿ. ಕಬ್ಬನ್ ಪಾರ್ಕ್ನಲ್ಲಿ ಅನುಮತಿಸಲಾಗಿದ್ದ ಸೈಕ್ಲಿಂಗ್ ಮತ್ತು ಸ್ಕೇಟಿಂಗ್ಗಳಂತಹ ಚಟುವಟಿಕೆಗಳು ಲಾಲ್ಬಾಗ್ನಲ್ಲಿ ಸಂಪೂರ್ಣ ನಿಷಿದ್ಧ.
ಹೊರಗಿನವರು ಗಿಡಗಳನ್ನು ನೆಡುವುದಕ್ಕೂ ಅವಕಾಶ ಇಲ್ಲ. ಆದರೆ ಪರಿಸರ ಜಾಗೃತಿ ಕಾರ್ಯಕ್ರಮಗಳಿಗೆ ತೋಟಗಾರಿಕೆ ಇಲಾಖೆಯಿಂದ ಮುಂಚಿತ ಅನುಮತಿ ಪಡೆದರೆ ಮಾತ್ರ ಅವಕಾಶವಿರಲಿದೆ. ಈ ಕ್ರಮವು ಸಸ್ಯಸಂಪತ್ತು ಮತ್ತು ಜೀನ್ ಬ್ಯಾಂಕ್ ಸಂರಕ್ಷಣೆ ಉದ್ದೇಶದಿಂದ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.

ಇದನ್ನು ಓದಿ : Tumakuru : ಮಹಾನಗರ ಪಾಲಿಕೆಗೆ DC ದಿಢೀರ್ ಭೇಟಿ – ಅಧಿಕಾರಿಗಳಿಗೆ ಖಡಕ್ ಸೂಚನೆ
ಲಾಲ್ಬಾಗ್ನಲ್ಲಿ ನಿಷೇಧಿಸಲಾದ ಚಟುವಟಿಕೆಗಳು
- ಸಿಂಗಲ್–ಯೂಸ್ ಪ್ಲಾಸ್ಟಿಕ್ ಬಳಕೆ
- ಮೊಬೈಲ್ ವ್ಯವಹಾರ, ಬ್ಯಾನರ್, ಹೋರ್ಡಿಂಗ್ ಪ್ರದರ್ಶನ
- ಧೂಮಪಾನ, ಮದ್ಯಪಾನ, ಮಾದಕ ವಸ್ತು ಸೇವನೆ
- ಅಸಭ್ಯ ವರ್ತನೆ
- ಸಾಮೂಹಿಕ ಯೋಗ
- ಮರ ಹತ್ತುವುದು, ರೆಂಬೆಗಳೊಂದಿಗೆ ಆಟವಾಡುವುದು, ಹಣ್ಣು–ಹೂವು ಕೀಳುವುದು
- ಪಕ್ಷಿ–ಮೀನಿಗೆ ಆಹಾರ ನೀಡುವುದು, ಸಾಕುಪ್ರಾಣಿಗಳನ್ನು ಕರೆತರುವುದು
- ಹುಲ್ಲುಗಾವಲುಗಳಲ್ಲಿ ಆಟವಾಡುವುದು
- ಹೊರಗಿನ ಆಹಾರ, ಆಟಿಕೆಗಳು, ಬಲೂನ್ಗಳನ್ನು ತರುವುದು
- ವಾಕ್ಥಾನ್, ಮ್ಯಾರಥಾನ್, ಸ್ಕೇಟಿಂಗ್, ಸೈಕ್ಲಿಂಗ್
- ಸ್ಫೋಟಕಗಳು, ಶಸ್ತ್ರಾಸ್ತ್ರಗಳು, ನಿಷೇಧಿತ ವಸ್ತುಗಳು
- ಟಿವಿ ಧಾರಾವಾಹಿ, ಸಿನೆಮಾ, ರೀಲ್ಸ್, ಪ್ರಿ/ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್, ಮಾಡೆಲಿಂಗ್, ಡ್ರೋನ್ ಛಾಯಾಗ್ರಹಣ
- ಖಾಸಗಿ ವಾಹನಗಳು
- ಸೌಂಡ್ ಸಿಸ್ಟಮ್, ಪಟಾಕಿ, ಗಾಳಿಪಟ, ಸಂಗೀತ ವಾದ್ಯಗಳು
- ಯಾವುದೇ ಸರ್ಕಾರೇತರ ಸಾರ್ವಜನಿಕ ಕಾರ್ಯಕ್ರಮಗಳು
ಅನುಮತಿಸಲಾದ ಚಟುವಟಿಕೆಗಳು
- ತೋಟಗಾರಿಕೆ ಇಲಾಖೆಯ ಹೂವಿನ ಪ್ರದರ್ಶನಗಳು, ಮೇಳಗಳು, ರೈತರ ತಾಂತ್ರಿಕ ಕಾರ್ಯಕ್ರಮಗಳು
- ಸರ್ಕಾರಿ ಇಲಾಖೆಗಳಿಂದ ಜಾಗೃತಿ ಕಾರ್ಯಕ್ರಮಗಳು
- ಇಲಾಖೆಯ ಅನುಮತಿಯೊಂದಿಗೆ ಸಸ್ಯ–ವನ್ಯಜೀವಿ–ಭೂದೃಶ್ಯ ಛಾಯಾಗ್ರಹಣ
- ಬ್ಯಾಂಡ್ ಸ್ಟ್ಯಾಂಡ್ನಲ್ಲಿ ಅನುಮತಿಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು
- ಮಾನ್ಯತೆ ಪಡೆದ ಸಂಸ್ಥೆಗಳ ಆರೋಗ್ಯ ತಪಾಸಣೆ ಶಿಬಿರಗಳು
- ಸಂದರ್ಶಕರು ಮತ್ತು ಪ್ರವಾಸಿಗರಿಂದ ಸ್ಟಿಲ್ ಫೋಟೋಗ್ರಫಿ

ನಾಗರಿಕರು ಉದ್ಯಾನವನಗಳಲ್ಲಿ ಹೆಚ್ಚಿನ ಸೌಲಭ್ಯಗಳು ಮತ್ತು ಚಟುವಟಿಕೆಗಳಿಗೆ ಅವಕಾಶ ನೀಡಲು ಒತ್ತಾಯಿಸುತ್ತಿದ್ದರೂ, ಸರ್ಕಾರವು ಉದ್ಯಾನವನದ ನೈಸರ್ಗಿಕ ಪರಿಸರ, ಜೀನ್ ಸಂಪನ್ಮೂಲ ಹಾಗೂ ಅಪರೂಪದ ಸಸ್ಯಪ್ರಭೇದಗಳನ್ನು ರಕ್ಷಿಸುವುದು ಪ್ರಮುಖ ಎಂಬ ನಿಲುವು ಕೈಗೊಂಡಿದೆ. ಹೊಸ ನಿಯಮಗಳು ಲಾಲ್ಬಾಗ್ನ ಹಸಿರು ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ಉಳಿಸುವತ್ತ ಸಹಕಾರಿ ಆಗಲಿವೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಇದನ್ನು ನೋಡಿ : ಸರಿಯಾಗಿ ಓಡಿಸಮ್ಮ ಎಂದಿದಕ್ಕೆ ಚಾಕು ಹಾಕಿದಳು! Highwayಲಿ ಅಡ್ಡಾದಿಡ್ಡಿ Scooty ಓಡಿಸಿದ ಮಹಿಳೆ




