ಕೆಎಂಎಫ್ ಪ್ರಕಾರ, ದೇಸಿ ಹಸು ಸಾಕಾಣಿಕೆ ಉತ್ತೇಜಿಸಲು ವಿಶೇಷ ಹಾಲಿನ ಮಾರಾಟ ಪ್ರಾರಂಭಿಸಲಾಯಿತು. ಗ್ರಾಹಕರಿಂದ ದೇಸಿ ಹಾಲಿಗೆ ಹೆಚ್ಚಿನ ಬೇಡಿಕೆ ಇದ್ದ ಕಾರಣ ಬೆಲೆ ಏರಿಕೆ ಅನಿವಾರ್ಯವಾಗಿದೆ.

ಜಿಎಸ್ಟಿ ಕಡಿತದ ಸಂತೋಷದ ಬೆನ್ನಲ್ಲೇ ಕೆಎಂಎಫ್ (KMF) ಗ್ರಾಹಕರಿಗೆ ಶಾಕ್ ನೀಡಿದೆ. ನಂದಿನಿ ದೇಸಿ ಹಾಲಿನ ಬೆಲೆಯಲ್ಲಿ ದಿಢೀರ್ 40 ರೂಪಾಯಿ ಏರಿಕೆ ಮಾಡಲಾಗಿದೆ. ಈಗ ಒಂದು ಲೀಟರ್ ದೇಸಿ ಹಾಲಿನ ಬೆಲೆ 120 ರೂ ಆಗಿದ್ದು, ಅರ್ಧ ಲೀಟರ್ ದೇಸಿ ಹಾಲಿನ ಬೆಲೆ 60 ರೂ ಆಗಿದೆ. ಮೊದಲು ಒಂದು ಲೀಟರ್ 80 ರೂ ಮತ್ತು ಅರ್ಧ ಲೀಟರ್ 40 ರೂ ಇತ್ತು. ಇಂದಿನಿಂದಲೇ ಈ ಹೊಸ ದರ ಜಾರಿಗೆ ಬಂದಿದೆ.
📈 ಹೊಸ ದರಗಳು (ಇಂದಿನಿಂದ ಜಾರಿಗೆ)
- 1 ಲೀಟರ್ ದೇಸಿ ಹಾಲು: ₹120 (ಹಿಂದಿನ ದರ ₹80)
- ಅರ್ಧ ಲೀಟರ್ ದೇಸಿ ಹಾಲು: ₹60 (ಹಿಂದಿನ ದರ ₹40)
ದೇಸಿ ಹಾಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಕೆಎಂಎಫ್ ಬೆಲೆ ಏರಿಕೆ ಮಾಡಿದಿದೆ. ದೇಸಿ ಹಸು ದಿನಕ್ಕೆ ಗರಿಷ್ಠ 1-2 ಲೀಟರ್ ಹಾಲು ಮಾತ್ರ ಕೊಡುತ್ತದೆ. ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಹಾಲಿನ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸಂಸ್ಥೆ ತಿಳಿಸಿದೆ. ಬೆಂಗಳೂರಿನಲ್ಲಿ ಪ್ರತಿ ದಿನ ಸುಮಾರು 3 ಸಾವಿರ ಲೀಟರ್ ದೇಸಿ ಹಾಲು ಪೂರೈಕೆ ಮಾಡಲಾಗುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಟ್ಯಾಂಕರ್ ವ್ಯವಸ್ಥೆಯನ್ನೂ ಮಾಡಿದ್ದಾರೆ.
ಕೆಎಂಎಫ್ ಅಧಿಕಾರಿಗಳ ಪ್ರಕಾರ, ಹಾಲಿನ ಮಾರಾಟದ ಹಣದಲ್ಲಿ ಶೇ.90ರಷ್ಟು ನೇರವಾಗಿ ದೇಸಿ ಹಸು ಸಾಕುವ ರೈತರಿಗೆ ನೀಡಲಾಗುತ್ತಿದೆ. ಆದರೂ, ಮಧ್ಯಮ ವರ್ಗದ ಗ್ರಾಹಕರಿಗೆ ಈ ದರ ಏರಿಕೆ ದೊಡ್ಡ ಹೊರೆ ಆಗಿದೆ. ಜಿಎಸ್ಟಿ ಕಡಿತದಿಂದ ಸಿಕ್ಕ ಸಂತೋಷವನ್ನು ಹಾಲಿನ ಬೆಲೆ ಏರಿಕೆ ತಕ್ಷಣವೇ ನಾಶಮಾಡಿದೆ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.

