Bengaluru : ಕಾರ್ಡ್ ಬೇಡ, ಡೆಪಾಸಿಟ್ ಬೇಡ! – Namma Metro ದಲ್ಲಿ ಪ್ರಯಾಣಿಸಲು ಮೊಬೈಲ್ QR ಪಾಸ್ ಆರಂಭ.

ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಮಹತ್ವದ ಹೆಜ್ಜೆ ಇಟ್ಟಿದೆ.
ಪ್ರಯಾಣಿಕರ ಅನುಕೂಲತೆ ಹೆಚ್ಚಿಸುವ ನಿಟ್ಟಿನಲ್ಲಿ ಮೊಬೈಲ್ ಕ್ಯೂಆರ್ ಆಧಾರಿತ ಪಿರಿಯಾಡಿಕಲ್ ಪಾಸ್ಗಳನ್ನು ಪರಿಚಯಿಸಲಾಗಿದ್ದು, ಇವು ಗುರುವಾರದಿಂದ (ಜನವರಿ 15) Namma Metro ಮೊಬೈಲ್ ಅಪ್ಲಿಕೇಶನ್ನಲ್ಲಿ ಲಭ್ಯವಾಗಲಿವೆ.
ಕಾರ್ಡ್ ಬೇಡ, ಡೆಪಾಸಿಟ್ ಬೇಡ!
ಈ ಹೊಸ ವ್ಯವಸ್ಥೆಯಡಿ ಒಂದು ದಿನ, ಮೂರು ದಿನ ಹಾಗೂ ಐದು ದಿನಗಳ ಅನಿಯಮಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಪಾಸ್ಗಳನ್ನು ಸಂಪೂರ್ಣ ಡಿಜಿಟಲ್ ರೂಪದಲ್ಲಿ ಖರೀದಿಸಬಹುದು. ಇದರಿಂದಾಗಿ ಪ್ರಯಾಣಿಕರಿಗೆ ಇನ್ನು ಮುಂದೆ ಕಾನ್ಟ್ಯಾಕ್ಟ್ಲೆಸ್ ಸ್ಮಾರ್ಟ್ ಕಾರ್ಡ್ ಪಡೆಯಲು ರೂ.50 ಭದ್ರತಾ ಠೇವಣಿ ಪಾವತಿಸುವ ಅಗತ್ಯ ಇರುವುದಿಲ್ಲ.

ಮೊಬೈಲ್ QR ಪಾಸ್ ಆರಂಭ
ಅಪ್ಲಿಕೇಶನ್ ಮೂಲಕ ಪಾಸ್ ಖರೀದಿಸಿದ ನಂತರ, ಪ್ರಯಾಣಿಕರು ತಮ್ಮ ಮೊಬೈಲ್ನಲ್ಲಿ ಪ್ರದರ್ಶಿಸುವ ಕ್ಯೂಆರ್ ಕೋಡ್ ಅನ್ನು ಮೆಟ್ರೋ ನಿಲ್ದಾಣಗಳ ಸ್ವಯಂಚಾಲಿತ ಶುಲ್ಕ ಸಂಗ್ರಹಣಾ (AFC) ಗೇಟ್ಗಳಲ್ಲಿ ಸ್ಕ್ಯಾನ್ ಮಾಡುವ ಮೂಲಕ ಪ್ರವೇಶ ಹಾಗೂ ನಿರ್ಗಮನ ಎರಡನ್ನೂ ಮಾಡಬಹುದು. ಇದರಿಂದ ಸಂಪರ್ಕರಹಿತ, ವೇಗದ ಮತ್ತು ಸುಗಮ ಪ್ರಯಾಣ ಸಾಧ್ಯವಾಗಲಿದೆ.
ಇದನ್ನು ಓದಿ : SSLC, PUC ಪ್ರಶ್ನೆ ಪತ್ರಿಕೆ ಲೀಕ್ಗೆ ಟ್ವಿಸ್ಟ್ – ಆಪ್ತ ವಿದ್ಯಾರ್ಥಿಳಿಗೆ ಶಿಕ್ಷಕರಿಂದ್ಲೇ ಲೀಕ್
ಹೊಸ ದರ ವ್ಯವಸ್ಥೆ
ಮೊಬೈಲ್ ಕ್ಯೂಆರ್ ಆಧಾರಿತ ಒಂದು ದಿನದ ಅನಿಯಮಿತ ಪ್ರಯಾಣ ಪಾಸ್ಗೆ ರೂ.250 ನಿಗದಿಪಡಿಸಲಾಗಿದ್ದು, ಇದು ಸ್ಮಾರ್ಟ್ ಕಾರ್ಡ್ನ ರೂ.300 ದರಕ್ಕಿಂತ ಕಡಿಮೆಯಾಗಿದೆ.
ಮೂರು ದಿನಗಳ ಪಾಸ್ಗೆ ರೂ.550 ಹಾಗೂ ಐದು ದಿನಗಳ ಪಾಸ್ಗೆ ರೂ.850 ದರ ನಿಗದಿಪಡಿಸಲಾಗಿದೆ. ಸ್ಮಾರ್ಟ್ ಕಾರ್ಡ್ಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿ ಈ ಪಾಸ್ಗಳು ಲಭ್ಯವಾಗಲಿವೆ.

ವಿಸ್ತರಿಸುವ ಯೋಜನೆ
ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಇತರೆ ಮೊಬೈಲ್ ಟಿಕೆಟ್ ಪ್ಲಾಟ್ಫಾರ್ಮ್ಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಈ ವ್ಯವಸ್ಥೆಯಿಂದ ಕಾರ್ಡ್ ವಿತರಣೆ ಹಾಗೂ ಮರುಪಾವತಿಗಾಗಿ ಸಾಲಿನಲ್ಲಿ ನಿಲ್ಲುವ ತೊಂದರೆ ತಪ್ಪುವುದರ ಜೊತೆಗೆ, ಪ್ರಯಾಣಿಕರ ಸಮಯವೂ ಉಳಿಯಲಿದೆ.
ಹೀಗಾಗಿ ಸುಗಮ, ಸರಳ ಹಾಗೂ ಡಿಜಿಟಲ್ ಪ್ರಯಾಣಕ್ಕಾಗಿ ಮೊಬೈಲ್ ಕ್ಯೂಆರ್ ಆಧಾರಿತ ಪಿರಿಯಾಡಿಕಲ್ ಪಾಸ್ಗಳನ್ನು ಬಳಸುವಂತೆ BMRCL ಪ್ರಯಾಣಿಕರಿಗೆ ಮನವಿ ಮಾಡಿದೆ.

ಇದನ್ನು ನೋಡಿ : ಶಿರಾದಲ್ಲಿ ಮದ್ಯವರ್ಜನ ಶಿಬಿರ ಮದ್ಯಾಸುರನನ್ನು ದಹಿಸಿ ಸಂತಸ




