Hubballi ಯಲ್ಲಿ ಅಮಾನುಷ ಕೃತ್ಯ – ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಥಳಿಸಿದ ಆರೋಪ.

Hubballi ನಗರದ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. BJP ಕಾರ್ಯಕರ್ತೆಯೊಬ್ಬರನ್ನು ಪೊಲೀಸರು ಬಂಧನದ ವೇಳೆ ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹುಬ್ಬಳ್ಳಿಯಲ್ಲಿ ಅಮಾನುಷ ಕೃತ್ಯ
ಕಾಂಗ್ರೆಸ್ನ ನಗರ ಪಾಲಿಕೆ ಸದಸ್ಯರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಬಂಧನದ ಸಂದರ್ಭದಲ್ಲಿ ಪೊಲೀಸರು ತಮ್ಮ ಮಿತಿಯನ್ನು ಮೀರಿ ದರ್ಪ ಮೆರೆದಿದ್ದಾರೆ ಎಂದು ಬಿಜೆಪಿ ವಲಯದಿಂದ ಆರೋಪಿಸಲಾಗಿದೆ.
ಮಹಿಳೆಯನ್ನು ಬಂಧಿಸಲು ಮುಂದಾದ ವೇಳೆ ಆಕೆ ಪ್ರತಿರೋಧ ತೋರಿದ ಕಾರಣಕ್ಕೆ ಪೊಲೀಸರು ಆಕೆಯನ್ನು ವಿವಸ್ತ್ರಗೊಳಿಸಿ ಕ್ರೌರ್ಯ ಮೆರೆದಿದ್ದಾರೆ ಎಂಬ ಆರೋಪ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಇದನ್ನು ಓದಿ : ಗುರುತು ಸಿಗದಂತೆ ಸುಟ್ಟು ಕರಕಲಾದ Car – ಇಬ್ಬರು ಸಜೀವ ದಹನ

ಹಳೇ ರಾಜಕೀಯ ವೈಷಮ್ಯವೇ ಕಾರಣವೇ?
ಈ ಘಟನೆಯ ಹಿಂದೆ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿನ ಹಳೇ ರಾಜಕೀಯ ವೈಷಮ್ಯ ಕಾರಣ ಎನ್ನಲಾಗುತ್ತಿದೆ. ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ತೆರಳಿದ್ದ ಬಿಜೆಪಿ ಕಾರ್ಯಕರ್ತೆ, “ನಮ್ಮ ಮತಗಳನ್ನು ಅಕ್ರಮವಾಗಿ ಡಿಲೀಟ್ ಮಾಡಲಾಗಿದೆ” ಎಂದು ಆರೋಪಿಸಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂದರ್ಭ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ಮತ್ತು ತಿಕ್ಕಾಟ ನಡೆದಿತ್ತು ಎಂದು ತಿಳಿದುಬಂದಿದೆ.
ಸೆಕ್ಷನ್ 307 ಅಡಿ ಪ್ರಕರಣ ದಾಖಲು
ಈ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ನ ನಗರ ಪಾಲಿಕೆ ಸದಸ್ಯ ಸುವರ್ಣ ಕಲ್ಲಕುಂಟ್ಲಾ ಅವರು ಪೊಲೀಸರಿಗೆ ದೂರು ನೀಡಿದ್ದು, ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರಿಂದಲೂ ಪ್ರತಿದೂರು ದಾಖಲಾಗಿದೆ.
ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಬಿಎನ್ಎಸ್ ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಬಂಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಥಳಿಸಿದ ಆರೋಪ
ಇನ್ನು ಬಂಧನದ ವೇಳೆ ಮಹಿಳೆ ಚೀರಾಡಿ ಪ್ರತಿರೋಧ ತೋರಿದಾಗ, ಪೊಲೀಸರು ಆಕೆಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಹಾಗೂ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ಮಹಿಳೆಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತೀವ್ರ ವಿರೋಧ ವ್ಯಕ್ತ
ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯ, ರಾಜಕೀಯ ಪಕ್ಷಗಳು ಹಾಗೂ ಮಹಿಳಾ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಪೊಲೀಸರ ನಡೆ ಕುರಿತು ಉನ್ನತ ಮಟ್ಟದ ತನಿಖೆಗೆ ಒತ್ತಾಯ ಕೇಳಿಬರುತ್ತಿದೆ.
ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನು ನೋಡಿ : CM ಯಾರಿಗೂ ಮನೆ ಕೊಟ್ಟಿಲ್ಲ – SIDDU ವಿರುದ್ಧ ಎಂ.ಟಿ.ಕೆ.ಆಕ್ರೋಶ

