Ayodhya Ram Temple : ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಕರ್ನಾಟಕ ಮೂಲದ ಅನಾಮಿಕ ದಾನಿಯೊಬ್ಬರು ಸುಮಾರು 30 ಕೋಟಿ ರೂ. ಮೌಲ್ಯದ ಚಿನ್ನದ ರಾಮನ ಮೂರ್ತಿಯನ್ನು ಕೊಡುಗೆ ನೀಡಿದ್ದಾರೆ.

Ayodhya Ram Temple : ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಮಹತ್ವದ ದಾನ
ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಕರ್ನಾಟಕ ಮೂಲದ ಅನಾಮಿಕ ದಾನಿಯೊಬ್ಬರು ಸುಮಾರು 30 ಕೋಟಿ ರೂ. ಮೌಲ್ಯದ ಚಿನ್ನದ ರಾಮನ ಮೂರ್ತಿಯನ್ನು ಕೊಡುಗೆ ನೀಡಿದ್ದಾರೆ.
ಈ ಮಹತ್ವದ ಮಾಹಿತಿಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯ ಡಾ. ಅನಿಲ್ ಮಿಶ್ರಾ ಅವರು ಹಂಚಿಕೊಂಡಿದ್ದಾರೆ.
10 ಅಡಿ ಎತ್ತರದ ಭವ್ಯ ರಾಮನ ಮೂರ್ತಿ
ದಕ್ಷಿಣ ಭಾರತದ ಸಾಂಪ್ರದಾಯಿಕ ಶಿಲ್ಪಕಲಾ ಶೈಲಿಯಲ್ಲಿ ರೂಪುಗೊಂಡಿರುವ ಈ ರಾಮನ ಮೂರ್ತಿ
- 10 ಅಡಿ ಎತ್ತರ , 8 ಅಡಿ ಅಗಲ ಹೊಂದಿದ್ದು, ವಜ್ರ, ಪಚ್ಚೆ, ನೀಲಮಣಿ ಸೇರಿದಂತೆ ಅಮೂಲ್ಯ ರತ್ನಗಳು ಹಾಗೂ ಚಿನ್ನದಿಂದ ಅಲಂಕರಿಸಲಾಗಿದೆ. ಮೂರ್ತಿಯ ಮೌಲ್ಯವನ್ನು ಸುಮಾರು 25ರಿಂದ 30 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಪ್ರಸ್ತುತ ಮೂರ್ತಿಯ ತೂಕವನ್ನು ತಜ್ಞರು ಪರಿಶೀಲಿಸುತ್ತಿದ್ದು, ಪ್ರಾಥಮಿಕ ಅಂದಾಜಿನ ಪ್ರಕಾರ ಇದರ ತೂಕ ಸುಮಾರು ಐದು ಕ್ವಿಂಟಾಲ್ ಇರಬಹುದು ಎಂದು ತಿಳಿದುಬಂದಿದೆ.
ಬಳಸಿರುವ ನಿಖರ ಲೋಹ ಮತ್ತು ರತ್ನಗಳ ಸಂಯೋಜನೆಯನ್ನು ತಜ್ಞರು ಗುರುತಿಸುವ ಕಾರ್ಯದಲ್ಲಿದ್ದಾರೆ.
ತಂಜಾವೂರಿನ ಕುಶಲಕರ್ಮಿಗಳ ಕೈಚಾಣಾಕ್ಷ್ಯ
ಈ ಭವ್ಯ ಪ್ರತಿಮೆಯ ಕೆತ್ತನೆ ಕಾರ್ಯದಲ್ಲಿ ತಂಜಾವೂರಿನ ನುರಿತ ಶಿಲ್ಪಿಗಳು ಪ್ರಮುಖ ಪಾತ್ರವಹಿಸಿದ್ದಾರೆ. ಅವರ ಕಲಾತ್ಮಕ ಕೈಚಾಣಾಕ್ಷ್ಯದಿಂದ ಮೂರ್ತಿಗೆ ವಿಶೇಷವಾದ ದೈವಿಕ ಹಾಗೂ ಭವ್ಯ ನೋಟ ಲಭಿಸಿದೆ.
ಇನ್ನು, ಈ ಅಮೂಲ್ಯ ರಾಮನ ಮೂರ್ತಿಯನ್ನು ದಾನ ಮಾಡಿದವರು ಕರ್ನಾಟಕ ಮೂಲದ ಅನಾಮಿಕ ಭಕ್ತರು ಎಂಬ ಮಾಹಿತಿ ಮಾತ್ರ ಲಭ್ಯವಿದ್ದು, ದಾನಿಯ ಸಂಪೂರ್ಣ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.
ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಯ ಎರಡನೇ ವಾರ್ಷಿಕೋತ್ಸವಕ್ಕೆ ಸಿದ್ಧತೆ
ಇದಕ್ಕೂ ಮಧ್ಯೆ, ಡಿಸೆಂಬರ್ 29ರಿಂದ 2026ರ ಜನವರಿ 2ರವರೆಗೆ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಯ ಎರಡನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಷ್ಠಾ ದ್ವಾದಶಿಗೆ ಸಕಲ ಸಿದ್ಧತೆಗಳು ಆರಂಭಗೊಂಡಿವೆ.
ವಾರ್ಷಿಕೋತ್ಸವದ ದಿನಗಳಲ್ಲಿ, ಬೆಳಿಗ್ಗೆ 9:30ರಿಂದ ಮಧ್ಯಾಹ್ನದವರೆಗೆ , ಗರ್ಭಗುಡಿಯಲ್ಲಿ ,ಶ್ರೀರಾಮ ಅಭಿಷೇಕ, ಶೃಂಗಾರ, ಭೋಗ ಸಮರ್ಪಣೆ ಹಾಗೂ ಪ್ರಕತ್ಯ ಆರತಿ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.




