DGP ರಾಮಚಂದ್ರರಾವ್ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

DGP ರಾಮಚಂದ್ರರಾವ್ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಕಚೇರಿಯಲ್ಲೇ ಮಹಿಳೆ ಜೊತೆಗಿನ ರಾಸಲೀಲೆಯ ವಿಡಿಯೋ ರಾಜ್ಯಾದ್ಯಂತ ವೈರಲ್ ಆದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣ ಕರ್ನಾಟಕ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು.
ಶಿಸ್ತು ಕ್ರಮ ಕೈಗೊಳ್ಳುವುದಾಗಿ ಘೋಷಣೆ
ವಿಡಿಯೋ ಹಾಗೂ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಸ್ತು ಕ್ರಮ ಕೈಗೊಳ್ಳುವುದಾಗಿ ಘೋಷಣೆ ಮಾಡಿದ್ದರು. ಅಲ್ಲದೇ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎಸ್. ಸಲೀಂ ಅವರಿಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು.

ನನ್ನ ವಿರುದ್ಧದ ಷಡ್ಯಂತ್ರ
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಡಿಜಿಪಿ ರಾಮಚಂದ್ರರಾವ್, ಇದು ಎಐ ಸೃಷ್ಟಿ ಮತ್ತು ತಮ್ಮ ವಿರುದ್ಧದ ಷಡ್ಯಂತ್ರ ಎಂದು ಸ್ಪಷ್ಟೀಕರಣ ನೀಡಿದ್ದರು. ನಿವೃತ್ತಿಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಅವರನ್ನು ಅಮಾನತುಗೊಳಿಸಲಾಗಿದೆ.
ಇದನ್ನು ಓದಿ : ಸ್ಲೀಪರ್ ಬಸ್ ಅಪಘಾತ – ಓರ್ವ ಸಾವು, 11 ಮಂದಿಗೆ ಗಾಯ!
ಸರ್ಕಾರದ ಆದೇಶದಲ್ಲಿ ಏನಿದೆ?
ಸರ್ಕಾರದ ಆದೇಶದ ಪ್ರಕಾರ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯವು ಡಿಜಿಪಿ ಡಾ. ಕೆ. ರಾಮಚಂದ್ರ ರಾವ್ ಅವರ ವಿಡಿಯೋ ಹಾಗೂ ಆಡಿಯೋ ಸಾರ್ವಜನಿಕ ವಲಯದಲ್ಲಿ ವೈರಲ್ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಈ ರೀತಿಯ ನಡವಳಿಕೆ ಸರ್ಕಾರಿ ನೌಕರನಿಗೆ ತಕ್ಕದಲ್ಲದೆ ಸರ್ಕಾರದ ಗೌರವಕ್ಕೆ ಧಕ್ಕೆ ಉಂಟುಮಾಡುವಂತಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಡಾ. ರಾಮಚಂದ್ರರಾವ್ ಅವರ ನಡವಳಿಕೆ ‘ಅಖಿಲ ಭಾರತ ಸೇವೆಗಳ (ನಡತೆ) ನಿಯಮಗಳು, 1968’ರ ನಿಯಮ 3ರ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಪೂರ್ಣಾವಧಿ ವಿಚಾರಣೆಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ.
ಯಾವುದೇ ಕಾರಣಕ್ಕೂ ಬಿಟ್ಟು ಹೋಗುವಂತಿಲ್ಲ
ಅಮಾನತ್ತಿನ ಅವಧಿಯಲ್ಲಿ ನಿಯಮಾನುಸಾರ ಮೂಲಭೂತ ಜೀವನ ವೆಚ್ಚ ಭತ್ಯೆ (ಸಂಬಳದ ಶೇಕಡಾವಾರು) ನೀಡಲಾಗುವುದು. ಅಲ್ಲದೇ ಅಮಾನತ್ತಿನ ಅವಧಿಯಲ್ಲಿ ಸರ್ಕಾರದ ಪೂರ್ವಾನುಮತಿಯಿಲ್ಲದೆ ಕೇಂದ್ರ ಕಚೇರಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗುವಂತಿಲ್ಲ ಎಂದು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.
ಇದನ್ನು ನೋಡಿ : ILLIGAL CLINIC | ತುಮಕೂರಿನಲ್ಲಿವೆ ಡೇಂಜರ್ ಕ್ಲಿನಿಕ್- ಕೇಳಲು ಹೋಗಿದ್ದಕ್ಕೆ ಹಲ್ಲೆ ಮಾಡಿಬಿಟ್ರು





